ಮಾಯ ಜಿಂಕೆ (Maaya Jinke)


#ಮಾಯಜಿಂಕೆ

ಪುಟ್ಟಗೌರಿ ಇಲ್ಲದ ಕಾಲದಲ್ಲಿ, ಕರೆಂಟ್ ಇಲ್ದೆ ಚಿಮ್ಣಿ ಬುಡ್ಡಿ ದೀಪ ಉರೀತಿದ್ದ ಕಾಲದಲ್ಲಿ.ಮನೆ ಗಂಡಾಳುಗಳು "ಏಳ ನಿದ್ರೆ ಬರಲ್ಲ ಕಾಡ್ ಸುತ್ತಾಡ್ಕುಂಡ್ ಬರನ.ಎಂತಾರ್ ಸಿಗ್ತದ ನೋಡನ" ಅಂತ ಕೋವಿ ರೆಡಿ ಮಾಡ್ಕೊತಿದ್ರೆ.ಇತ್ತ ಇನ್ನೊಂದು ಕಡೆ ಕೋವಿ ಕಂಡವರೆ ದೊಡ್ಡಪ್ಪ ಶಿಕಾರಿ ಕಥೆ ಹೇಳಲು ಶುರು. 
"ಅಲ್ ಉಂದ್ ಹಂದಿ ಹೊಡ್ದಿದ್ದು ಕ್ವಿಂಟಲ್ ಆಗಿತ್ತು. 
 ಮಾಂಸ ಅಂದ್ರೆ ಥೇಟ್ ತುಪ್ಪ ಸುರ್ದಂಗ್ ಎಣ್ಣೆ ಸುರೀದು"
 ಅವರ ಮಾತಿಗೆ ಮರುಮಾತಾಗಿ. 
" ಅದೆಂತದು ನಾ ಉಂದ್ ಹೊಡ್ದಿದ್ದೆ. ಕನಿಷ್ಠ ಅಂದ್ರು ಈಗಿನ್ ತೋಟ ಕೋವಿಲ್ ಲೆಕ್ಕ ಹಾಕುದಾರ್ ಉಂದ್ 10 ತೋಟ ಬೇಕೇನ್, ಅದು ಸಾಮಾನ್ಯ ಒಂದ್ ಕ್ವಿಂಟಲ್ ಮೇಲಾಗುದು"ಅಂತ ಅಪ್ಪನ ಮಾತು. 
" ಆ ಹಂದಿನ ಗುಡ್ಡುದ್ ತಲೆಯಿಂದ ನಾ ಒಬ್ನೆ ಹೊತ್ತಿದ್ದೆ" ಅಂತ ಇನ್ನೊಬ್ರು. 
ಹೀಗೆ ಶಿಕಾರಿಗೆ ಹೊರ್ಡೊವರ್ಗು ಚರ್ಚಾ ಸ್ಪರ್ಧೆ ನಡಿತಿದೆ ಅನ್ಸೋದು ನಮ್ಗೆ.ಅದ್ರಲ್ ಎಷ್ಟು ಸುಳ್ಳೋ ಎಷ್ಟು ಸತ್ಯನೋ ಆ ಹಂದಿನೆ ಬಂದು ಹೇಳ್ಬೇಕಷ್ಟೆ. 
 ನಮ್ಗು ಕಥೆ ಕೇಳೊ ವಯಸ್ಸು ಕೇಳ್ತಿದ್ವಿ. ಹೀಗೆ ಹೇಳಿದ್ ಕಥೆಲಿ ದಯ್ಯದ್ ಶಿಕಾರಿ ಕಥೆ ಇವಾಗ್ಲು ನೆನ್ಪಾಗತ್ತೆ. 

ಹಿಂದೆ ಅದೊಂದು ಕಾಲವಿತ್ತಂತೆ. 
ಕ್ರಿಸ್ತ ಶಕ, ಕ್ರಿಸ್ತ ಪೂರ್ವ ಅಂತೆಲ್ಲ ಹೇಳ್ದ್ರೆ ನಮ್ ಮಾಲ್ನಾಡೋರಿಗ್ ಗೊಂದಲ ಆಗ್ಬೋದು. So ಸಿಂಪಲ್ಲಾಗ್ ಹೇಳೊ ಪ್ರಯತ್ನ ಮಾಡ್ತೀನಿ. 
 ನನ್ ಯೋಚನೆ ಪ್ರಕಾರ ನನ್ನಜ್ಜನ ಕಾಲ ಇರ್ಬೋದು. ಅದಲ್ಲ ಅಂದ್ರೆ ಅಜ್ಜಿಯೋರ್  ಹೇಳೋಹಾಗ್ 'ಓಬೀ ರಾಯರ ಕಾಲ' ಇರ್ಬೋದು. ಇಲ್ಲಂದ್ರೆ ನನ್ನಮ್ಮ ಹೇಳೋಹಾಗೆ "ನಾಯಿ ಸಂತೆ"ನೆಡೆಯುತ್ತಿದ್ದ ಕಾಲ ಇದ್ರು ಇರ್ಬೋದು.ಆ ಕಾಲದಲ್ಲಿ ನೆಡೆದ ಕಥೆ ಇದು.

ಓಕೆ ಈಗ ಕಥೆಗ್ ಬರಣ... 

ಅವಾಗೆಲ್ಲ ಊರೂರಿಗೆ ಒಂದು ಕಾಡು  ಅಂತ ಇತ್ತಂತೆ.ಆ ಕಾಡಿಗೊಂದು ದಯ್ಯನೋ, ದೇವ್ರೊ ಅಂತೆ.ಆ ಕಾಡಿಗೆ ಸಂಬಂದಪಟ್ಟವ್ರು ಮಾತ್ರ ಶಿಕಾರಿಗೆ ಪ್ರವೇಶ. ಅದ್ಬಿಟ್ಟು ಬೇರೆ ಯಾವ ಊರೋರು ಆ ಕಾಡಿಗೆ ಶಿಕಾರಿಗ್ ಬಂದ್ರು ಸಹ ಆ ದಯ್ಯನೋ ದೇವ್ರೊ ಯಾವ್ದೊ ಇತ್ತಲ್ಲ ಅದು ಪ್ರಾಣಿ ರೂಪದಲ್ಲಿ ಕಂಡು ಹೆದರಿಸುತಿತ್ತು, ಆಮೇಲೆ ಏನಾದ್ರು ಹರ್ಕೆ ಹೇಳ್ಕುಂಡ್ರೆ ಮಾತ್ರ ಆ ಕಾಡಿಂದ ಭಯ ಇಲ್ದೆ ಹೊರಗ್ ಬರ್ಬೋದಿತ್ತು ಅನ್ನೋದನ್ನ ನನ್ನ ದೊಡ್ಡಪ್ಪನ ಶಿಕಾರಿ  ಕಥೆ ಹೇಳ್ತದೆ..
ಕಥೆ ಈ ಕೆಳಗೆ ಕಾವ್ಯರೂಪಲ್ಲಿದೆ ದಯವಿಟ್ಟು ನಿಧಾನ ಓದಿ ಅರ್ಥ ಮಾಡ್ಕೊಳಿ..

#ಮಾಯಾ_ಜಿಂಕೆ
 ಮಾಯಜಿಂಕೆಯೊಂದು ಕಪ್ಪು ಕಾನನ ಸೀಳಿ ಕಾಡ ನುಗ್ಗಿತಲ್ಲೋ. 
ಕೋವಿ ಕಣ್ಣಿಗೆ ಸಿಗದೆ ಮೂಡಿ ಮರೀಚಿಕೆಯಾಗಿ ದಯ್ಯಾಟವಾಡಿತಲ್ಲೋ. 
ಕತ್ತು ಎತ್ತುತಲೆ ಕೋಡು ಕೊಡವುತಲೆ ಮರೆಯಮಾಚಿತಲ್ಲೋ.. 
ಮಾಯದಾ ಜಿಂಕೆ ಮಾಯದಾ ಜಿಂಕೆ ಮಾಯದಾ ಜಿಂಕೆ...   
 ಹುಲಿಯ ಸದ್ದು ದೂರದಲಿ ಮೊಳಗಿರಲು. ಕರಿಯ ಹಕ್ಕಿ ಗರಿ ಬಿರಿದು ಕಿರುಚಿರಲು.
ಕುರಿಮರಿಯು ಹೆದರಿ ಕರಿಬಂಡೆ ಏರಿರಲು. ಕರ್ಕಶ ಶಬ್ದದಲಿ ನರಿ ಕೂಗು ಕೇಳಿರಲು.
ಮಾಯದಾ ಜಿಂಕೆ ಮರ್ಮದಲೆ ಮರೆಯಾಯಿತಲ್ಲೋ...

  ಕಿವಿಯ ನೆಟ್ಟಿರಲು ಕರಿನೆರಳ ಸದ್ದಿಲ್ಲ.
ಕರಿ ಕವಿದ ಕಾನನದಿ ಕರುಣೆಯ ಇಂಬಿಲ್ಲ.
ಕರಿ ಕೋವಿ ಕೈಜಾರಿ ಕಾಲೆರೆಡು ನಡುಗುತಿವೆ.
ಢವ ಢವ ಸದ್ದಿನಲಿ ಎದೆ ಬಡಿತ ಮೂಡುತಿದೆ.
ಮಾಯ ಜಿಂಕೆಯ ಮೋಡಿ ಮೈ ನಡುಕ ನಾಟಿತಲ್ಲೋ.

 ಬಿಳಿಯ ಚಂದ್ರನೂ ಕೂಡ ಮೋಡದಲಿ ಮರೆಯಾದ. ಒಡಲ ಹಕ್ಕಿಯ ಕೂಗು ಹಸಿವಿಗೆ ಬಿಸಿಯೂಯ್ತು. 
ದೇವ ದಿಂಡಿರ ಭಜನೆ ಬಾಯಿ ಮುಟ್ಟುತಲಿಲ್ಲ.
ಭಯದ ಬೇಗೆಗೆ ಬೆದರಿ ದಾರಿ ತಪ್ಪಿದೆನಲ್ಲ.
ಮಾಯ ಜಿಂಕೆಯ ಮಾಠ ಮೂಢಕ್ಕೆ ನೂಕಿತಲ್ಲೋ..

ಹರಕೆ ಕೊಟ್ಟೆವು ತಾಯೆ ಕಾನನದಿ ಕಾಪಾಡು.
ನಿನ್ನ ಮಕ್ಕಳು ತಾಯಿ ಹೆದರಿಸಿ ನೋಡದಿರು.
ಕುರಿ ಕೋಳಿ ಕೋವಿಯ ಹುರಿತುಂಡು ಎಡೆಯಿಟ್ಟು. ಹರಕೆಯ ದಿನದಂದು ನಿಮಗೊಂದು ಬಲಿ ಕೊಟ್ಟು. ತಪ್ಪನ್ನು ಒಪ್ಪಿಸುವೆ ಮನ್ನಣೆ ಕೇಳುತಲೆ.
ಮಾಯ ಜಿಂಕೆಯು ಮುಂದೆ ಚಂಗನೆ ಜಿಗಿಯಿತಲ್ಲೋ.. ಚಂದಿರನ ಬೆಳಕೆದ್ದು ಕಾನನವು ಕಣ್ಣುಜ್ಜಿ ಮಾಯವನು ಮಾಸಿ ನವವನವು ಮೂಡಿತಲ್ಲೋ...              
         - ಅಶು ಪರಮಾತ್ಮ 💕

Comments

Post a Comment